ಶಿವಪ್ಪನಾಯಕ
	ಕೆಳದಿ ರಾಜಮನೆತನದ ಪ್ರಸಿದ್ಧ ದೊರೆ (ಸು. 1645-60). ವೀರಭದ್ರನಾಯಕನ ತರುವಾಯ ಅವನಿಗೆ ಮಕ್ಕಳಿರಲಿಲ್ಲ ವಾಗಿ ಚಿಕ್ಕ ಸಂಕಣ್ಣನಾಯಕನ ಮೊಮ್ಮಗ, ಸಿದ್ದಪ್ಪನಾಯಕನ ಹಿರಿಯ ಮಗನಾದ ಈತ ಪಟ್ಟಕ್ಕೆ ಬಂದ. ಈತ ವೀರಭದ್ರನಾಯಕನ ಆಳಿಕೆಯಲ್ಲಿ ಆತನ ಬಲಗೈಯಂತಿದ್ದು, ಆಡಳಿತದಲ್ಲಿ ಅಪಾರ ಅನುಭವ ಪಡೆದಿದ್ದ. ಇವನ ಆಳಿಕೆಯಲ್ಲಿ ಕೆಳದಿ ಅರಸು ಮನೆತನದ ಪ್ರಭಾವ ಬೆಳೆಯಿತು.

	ಬಿಜಾಪುರದ ಸೈನ್ಯದ ಮುತ್ತಿಗೆಯಿಂದ ವೆಲ್ಲೂರಿನಲ್ಲಿ ನೆಲಸಿದ್ದ ವಿಜಯನಗರ ವಂಶದ ಶ್ರೀರಂಗರಾಯ ಅಲ್ಲಿಂದ ಓಡಿಹೋಗಬೇಕಾಯಿತು. ಈ ಸಂದರ್ಭದಲ್ಲಿ ಶಿವಪ್ಪನಾಯಕ ವೆಲ್ಲೂರಿನಿಂದ ಬಿಜಾಪುರದ ಸೈನ್ಯವನ್ನು ಓಡಿಸಿ ಶ್ರೀರಂಗರಾಯ ಪುನಃ ಅಲ್ಲಿ ನೆಲಸುವಂತೆ ಮಾಡಿ, ಅವನಿಂದ ಪರವಾರಣವಾರಣ, ರಾಮಬಾಣ ಇತ್ಯಾದಿ ಬಿರುದುಗಳನ್ನೂ ಖಿಲ್ಲತ್ತುಗಳನ್ನೂ ಪಡೆದ. ಮತ್ತೆ ಶ್ರೀರಂಗರಾಯ ತನ್ನ ರಾಜ್ಯವನ್ನು ಕಳೆದುಕೊಂಡಾಗ, ಶಿವಪ್ಪನಾಯಕ ಆತನಿಗೆ ಸಕ್ಕರೆಪಟ್ಟಣದ ಆಧಿಪತ್ಯವನ್ನು ಕೊಟ್ಟ. ವಿಜಯನಗರ ಸಾಮ್ರಾಜ್ಯವನ್ನು ಪುನರುಜ್ಜೀವಿಸಬೇಕೆಂಬ ಉದಾತ್ತ ಹಂಬಲ ಇವನದಾಗಿತ್ತು. ಸೋದೆ, ಬೀಳಗಿ, ತರೀಕೆರೆ ಮುಂತಾದ ಪಾಳೆಯಗಾರರ ಸೈನ್ಯ ಸಹಾಯದಿಂದ ಬೇಲೂರನ್ನು ಗೆದ್ದುಕೊಂಡು ಶ್ರೀರಂಗರಾಯನಿಗೆ ಕೊಟ್ಟು ರಾಯನ ಸಂಸ್ಥಾನವನ್ನು ಶಿವಪ್ಪ ನೆಲೆಗೊಳಿಸಿದ ಎಂದು ಕೆಳದಿನೃಪವಿಜಯದಲ್ಲಿ ಹೇಳಿದೆ. ಅದೇ ಗ್ರಂಥದಲ್ಲಿ ಹೇಳಿದಂತೆ ಶಿವಪ್ಪನಾಯಕ ಪಶ್ಚಿಮತೀರ ಪ್ರದೇಶದಲ್ಲಿ ಮಂಗಳೂರು, ಮಳವೆ, ಕಟ್ಟೆಕೀಳೂರು, ಬೇಕಲು, ಚಿತ್ತಾರಿ ಕೋಟೆಗಳನ್ನೂ ಗೆದ್ದ. ಚಂದ್ರಗಿರಿ ಕೋಟೆಯನ್ನು ಬಲಪಡಿಸಿದ. ಪೋರ್ಚುಗೀಸರ ಮೇಲೆ ಯುದ್ಧ ಸಾರಿ ಅವರನ್ನು ಮಂಗಳೂರಿನಲ್ಲಿ ಸೋಲಿಸಿದ. ಹೊನ್ನಾವರದಿಂದ ಅವರನ್ನು ಓಡಿಸಿದ. ಕಾಂಬೋಲಿಮ್ ಬಳಿ ಶಿವಪ್ಪನಾಯಕನಿಗೂ ಪೋರ್ಚುಗೀಸರಿಗೂ ಘೋರವಾದ ಕದನವಾಗಿ ನಾಯಕ ಗೆದ್ದ. ಪೋರ್ಚುಗೀಸರ ಬಲ ಕುಗ್ಗಿ ಪಶ್ಚಿಮತೀರದಲ್ಲಿ ಮಿರ್ಜಿಯಿಂದ ಕಾಸರಗೋಡಿನವರೆಗಿನ ತೀರಪ್ರದೇಶ ಶಿವಪ್ಪನಾಯಕನ ಹತೋಟಿಗೆ ಬಂತು. ಈತ ಮಲಯಾಳದೇಶಕ್ಕೂ ನುಗ್ಗಿ ಯಾರಿಗೂ ಬಗ್ಗದ ನಾಯಕರನ್ನು ಜಯಿಸಿ, ನೀಲೇಶ್ವರದಲ್ಲಿ ಜಯಸ್ತಂಭವನ್ನು ನಿಲ್ಲಿಸಿದ.

	ಬಿಜಾಪುರದ ಮಹಮ್ಮದ್ ಆದಿಲ್ ಷಾನ ಮರಣದ ಅನಂತರ ಇಕ್ಕೇರಿ, ಸೊರಬ, ಉಡುಗಣೆ, ಮಹದೇವಪುರದ ಕೋಟೆಗಳನ್ನೂ ಶಿರಸಿ, ಬನವಾಸಿ, ಹೇರೂರು, ಬೋಳೂರು, ಸೋದೆ ಮುಂತಾದ ಸ್ಥಳಗಳನ್ನೂ ಗೆದ್ದುಕೊಂಡ. ಸೋದೆಯ ದೊರೆ ಮಧುಲಿಂಗನಾಯಕನ ಬಿನ್ನಹವನ್ನು ಮನ್ನಿಸಿ ಅವನ ರಾಜ್ಯವನ್ನು ಹಿಂತಿರುಗಿಕೊಟ್ಟ. ಆರಗ, ಗುತ್ತಿ, ಮಂಗಳೂರು ಮತ್ತು ಪಶ್ಚಿಮ ಕರಾವಳಿ ಪ್ರದೇಶವನ್ನು ಶಿವಪ್ಪನಾಯಕ ಆಳುತ್ತಿದ್ದನೆಂಬ ಸಂಗತಿ ಒಂದು ಶಾಸನದಿಂದ ವ್ಯಕ್ತವಾಗುತ್ತದೆ.

	ಶ್ರೀರಂಗರಾಯನ ಕೈತಪ್ಪಿಹೋಗಿದ್ದ ಶ್ರೀರಂಗಪಟ್ಟಣವನ್ನು ಮರಳಿ ದೊರಕಿಸಿಕೊಡುವ ಉದ್ದೇಶದಿಂದ ಈತ ದೊಡ್ಡ ಸೈನ್ಯದೊಂದಿಗೆ ಶ್ರೀರಂಗಪಟ್ಟಣದ ಮೇಲೆ ಏರಿಹೋದ (1659). ಹಾಸನದ ಹತ್ತಿರ ಗ್ರಾಮವೆಂಬಲ್ಲಿ ಬೀಡು ಬಿಟ್ಟಾಗ ಮೈಸೂರಿನ ದೇವರಾಜ ಒಡೆಯ ದಳವಾಯಿ ಹಂಪರಾಜಯ್ಯನೊಡನೆ ಭಾರಿ ಸೈನ್ಯವನ್ನು ಕಳಿಸಿದ. ಆಗ ಜರುಗಿದ ಯುದ್ಧದಲ್ಲಿ ಶಿವಪ್ಪನಾಯಕನಿಗೆ ಸಂಪೂರ್ಣ ಜಯವಾಯಿತು. ಅನಂತರ ಶ್ರೀರಂಗಪಟ್ಟಣದ ಕೋಟೆಗೆ ಮುತ್ತಿಗೆ ಹಾಕಿದ. ಆ ಕೋಟೆಯ ಅಧಿಕಾರಿಗಳು ಕೆಳದಿಯವರ ಮುತ್ತಿಗೆಯನ್ನು ಎದುರಿಸಲಾಗದೆ, ಬಿಜಾಪುರದ ಸೈನ್ಯದ ನೆರವನ್ನು ಪಡೆಯಲು ಹವಣಿಸಿದರು. ಬಹಲೂಖಾನನ ನೇತೃತ್ವದಲ್ಲಿ ಬಿಜಾಪುರದ ಸೈನ್ಯ ಮೈಸೂರಿನವರ ಸಹಾಯಕ್ಕೆ ಬಂತು. ಶಿವಪ್ಪನಾಯಕ ಉಪಾಯದಿಂದ ಅವರನ್ನು ಹಿಂತಿರುಗುವ ಹಾಗೆ ಮಾಡಿದ. ಆದರೆ ಶಿವಪ್ಪನಾಯಕನಿಗೆ ಶ್ರೀರಂಗಪಟ್ಟ ಣವನ್ನು ವಶಪಡಿಸಿಕೊಳ್ಳಲಾಗಲಿಲ್ಲ.

	ಶಿವಪ್ಪನಾಯಕ ಸರ್ಕಾರಕ್ಕೂ ಪ್ರಜೆಗಳಿಗೂ ಅನುಕೂಲವಾಗುವಂಥ ಕಂದಾಯದ ಶಿಸ್ತನ್ನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ. ಶಿವಪ್ಪನಾಯಕನ ಶಿಸ್ತೆಂದು ಇಂದಿಗೂ ಅದರ ಪ್ರಸಿದ್ಧಿಯನ್ನು ಜನರು ಮರೆತಿಲ್ಲ. ರೈತರಿಗೆ ಬೇಕಾದಷ್ಟು ಸಹಾಯಮಾಡಿ ಒಂದು ಗೋಪಾದ ದಷ್ಟು ಭೂಮಿ ಸಹ ಪಡಬೀಳದ ಹಾಗೆ ನೋಡಿಕೊಂಡನೆಂದೂ ಬಿದನೂರು ನಗರವನ್ನು ಒಂದು ಯೋಜನೆಗನುಸಾರವಾಗಿ ವಿಸ್ತರಿಸಿದ ನೆಂದೂ ಕೆಳದಿನೃಪವಿಜಯ ತಿಳಿಸುತ್ತದೆ. ಇವನ ಶಿಸ್ತಿನಷ್ಟೇ ನ್ಯಾಯ ದೃಷ್ಟಿಯೂ ಪ್ರಖ್ಯಾತವಾಗಿದೆ.

	ಶಿವಪ್ಪನಾಯಕ ತುಂಗಭದ್ರಾ ನದಿಯ ತೀರದ ಮೇಲೆ ಶಿವರಾಜಪುರ ವೆಂಬ ಅಗ್ರಹಾರವನ್ನು ಸ್ಥಾಪಿಸಿದ. ಕಾಶಿಕ್ಷೇತ್ರದಲ್ಲಿ ಅನೇಕ ದಾನಧರ್ಮ ಪೂಜೆಗಳು ನಡೆಯುವಂತೆ ನಿಯಮಿಸಿದ (ಕಾಶಿಯಲ್ಲಿರುವ ಜಂಗಮವಾಡಿ ಯಲ್ಲಿ ಇವನ ಭಾವ ಚಿತ್ರವಿದೆ). ರಾಮೇಶ್ವರದಿಂದ ಕಾಶಿಯವರೆಗಿನ ಪ್ರದೇಶದಲ್ಲಿದ್ದ ಮುಖ್ಯವಾದ ಶೈವ-ವೈಷ್ಣವ ದೇವಾಲಯಗಳಲ್ಲಿ ಪೂಜೆ ನಡೆಯುವ ಹಾಗೆ ಮಾಡಿದ. ಜಂಗಮರಿಗೆ ಊಟದ ವ್ಯವಸ್ಥೆಯನ್ನು ಮಾಡಿದ. ಶೃಂಗೇರಿ ಮತ್ತು ಇತರ ಮಠಗಳಿಗೆ ಪರಂಪರಾಗತ ರಾಜಾಶ್ರಯವನ್ನು ಮುಂದುವರಿಸಿದ.

	ಶಿವಪ್ಪನಾಯಕ ಕ್ರೈಸ್ತರಿಗೆ ತನ್ನ ರಾಜ್ಯದಲ್ಲಿ ಉಪದೇಶ ನೀಡುವ ಮತ್ತು ಮತಾಂತರಗೊಳಿಸುವ ಅವಕಾಶ ನೀಡಿದ್ದ. ಆದರೆ ಚರ್ಚಿನ ಅಧಿಕಾರಿಗಳು ಮಾತ್ರ ಭಾರತೀಯರೇ ಆಗಿರಬೇಕೆಂಬ ಇವನ ಕಟ್ಟಳೆ ಇವನ ದೇಶಾಭಿಮಾನಕ್ಕೆ ಒಳ್ಳೆಯ ನಿದರ್ಶನ.

	ಶಿವಪ್ಪನಾಯಕ ಸು. 1660ರಲ್ಲಿ ನಿಧನನಾದ. ಇವನಿಗೆ ಲಿಂಗಮ್ಮಾಜಿ ಮತ್ತು ಶಾಂತಮ್ಮಾಜಿ ಎಂಬ ಇಬ್ಬರು ರಾಣಿಯರು, ಭದ್ರಪ್ಪ ಮತ್ತು ಸೋಮಶೇಖರ ಎಂಬ ಇಬ್ಬರು ಗಂಡುಮಕ್ಕಳು ಇದ್ದರು.

	ಕೆಳದಿ ಅರಸರಲ್ಲಿ ಶಿವಪ್ಪನಾಯಕ ಶಿಖರವ್ಯಕ್ತಿ. ಇವನು ಪರಾಕ್ರಮ, ಸ್ವಾಮಿನಿಷ್ಠೆ, ಮುತ್ಸದ್ದಿತನ, ಆಡಳಿತ ಕೌಶಲ್ಯ, ನ್ಯಾಯದೃಷ್ಟಿ, ಪರಧರ್ಮಸ ಹಿಷ್ಣುತೆಗಳಿಂದ ಉತ್ತಮವಾಗಿ ರಾಜ್ಯವಾಳಿ, ವೀರಭದ್ರನಾಯಕನ ಕಾಲದಲ್ಲಿ ಶಿಥಿಲವಾಗಿದ್ದ ಕೆಳದಿ ರಾಜ್ಯದ ದೇಶಕೋಶಗಳನ್ನೂ ಕೀರ್ತಿಯನ್ನೂ ವರ್ಧಿಸಿದ.							
	(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ